Downloads

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಡೆದು ಬಂದ ದಾರಿ


      8 ದಶಕಗಳಷ್ಟು ಹಿಂದೆ ಸಮಾನ ಮನಸ್ಕರ ಕೂಟವೊಂದು ಸಹಕಾರ ತತ್ವ ಪ್ರಚಾರಕ್ಕಾಗಿ ಹಾಗೂ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಅಗತ್ಯವಾದ ಶಿಕ್ಷಣ ನೀಡುವ ಉದ್ದೇಶದಿಂದ ಸಹಕಾರ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಸಹಕಾರ ಕ್ಷೇತ್ರದ ಚಟುವಟಿಕೆಗಳಿಗೆ ಪ್ರಚಾರ ನೀಡುವುದು ಇದರ ಧ್ಯೇಯೋದ್ದೇಶವಾಗಿತ್ತು. ಸಮಾನ ಮನಸ್ಕರ ಈ ಪ್ರಯತ್ನದಿಂದ 1924 ಆಗಸ್ಟ್ 27 ರಂದು ಮೈಸೂರು ಪ್ರಾಂತೀಯ ಸಹಕಾರಿ ಸಂಸ್ಥೆಯೊಂದು ಅಸ್ತಿತ್ವಕ್ಕೆ ಬಂದಿತು. ಇದರಿಂದ ಸಹಕಾರಿ ತತ್ವಗಳ ಮತ್ತು ಆಚರಣೆಗಳ ಬೋಧನೆಗೆ, ಶಿಕ್ಷಣ - ತರಬೇತಿ ನೀಡುವುದಕ್ಕೆ, ಪ್ರಚಾರ ಕಾರ್ಯ ಕೈಗೊಳ್ಳುವುದಕ್ಕೆ ಸಹಾಯಕವಾಯಿತು. ಈ ಸಂಸ್ಥೆಯನ್ನು ರಾಜ್ಯ ಪುನರ್ ವಿಂಗಡನಾ ಸಮಯದಲ್ಲಿ ಮೈಸೂರು ರಾಜ್ಯ ಸಹಕಾರ ಯೂನಿಯನ್ ಎಂದು ಪುನರ್ ನಾಮಕರಣ ಮಾಡಲಾಯಿತು. ಹಾಗೆಯೇ 1987 ರಲ್ಲಿ ಸರ್ಕಾರಿ ಆದೇಶದನ್ವಯ 4 ಸಹಕಾರಿ ಸಂಸ್ಥೆಗಳಾದ [(1) ಕರ್ನಾಟಕ ರಾಜ್ಯ ಸಹಕಾರ ಯೂನಿಯನ್ ನಿ., ಬೆಂಗಳೂರು (2) ಕರ್ನಾಟಕ ರಾಜ್ಯ ಸಹಕಾರ ಭವನ ನಿ., ಬೆಂಗಳೂರು (3) ಕರ್ನಾಟಕ ಸಹಕಾರ ಮುದ್ರಣಾಲಯ ನಿ., ಬೆಂಗಳೂರು ಮತ್ತು (4) ಕರ್ನಾಟಕ ರಾಜ್ಯ ಸಹಕಾರ ಪ್ರಕಾಶನ ಮಂದಿರ ನಿ., ಬೆಂಗಳೂರು] ಇವುಗಳನ್ನು ಒಗ್ಗೂಡಿಸಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಎಂದು ತಿದ್ದುಪಡಿಯಾಗಿ, ದಿನಾಂಕ:22.04.1987 ರಂತೆ ಉಪನಿಯಮಗಳ ತಿದ್ದುಪಡಿಯಾಗಿ ರಚಿತವಾಗಿರುತ್ತದೆ.

      ಈ ಸಂಸ್ಥೆಯ ಕಾರ್ಯಚಟುವಟಿಕೆಗಳು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಸಂಸ್ಥೆಯ ರಜತ ಮಹೋತ್ಸವ, ಸುವರ್ಣ ಮಹೋತ್ಸವ ಮತ್ತು ವಜ್ರ ಮಹೋತ್ಸವವನ್ನು ಆಚರಿಸಲಾಗಿದೆ.



  ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಕಾರ್ಯಚಟುವಟಿಕೆಗಳು


      ಸಹಕಾರ ಚಳುವಳಿಯ ಬೆಳವಣಿಗೆಗಾಗಿ ಅಗತ್ಯವಾದ ಶಿಕ್ಷಣ, ತರಬೇತಿ ನೀಡುವುದು ಹಾಗೂ ಸಹಕಾರ ಚಟುವಟಿಕೆಗಳಿಗೆ ವ್ಯಾಪಕ ಪ್ರಚಾರ ನೀಡುವುದು ಮಹಾಮಂಡಳದ ಉದ್ದೇಶವಾಗಿದೆ.

  • ಸಹಕಾರ ಶಿಕ್ಷಣದಡಿಯಲ್ಲಿ ಸದಸ್ಯ ಶಿಕ್ಷಣ ಮತ್ತು ಅಭಿವೃದ್ದಿ ಕಾರ್ಯಕ್ರಮವು ಯಶಸ್ವಿಯಾಗಿ ಹಾಗೂ ಪರಿಣಾಮಕಾರಿಯಾಗಿ ರಾಷ್ಟ್ರೀಯ ಸಹಕಾರ ಯೂನಿಯನ್‍ನ ಮಾರ್ಗದರ್ಶನದೊಂದಿಗೆ 1957ರಲ್ಲಿ ಜಾರಿಗೆ ಬಂತು. ಈ ಯೋಜನೆಯಡಿಯಲ್ಲಿ ಸಹಕಾರ ಸಂಘಗಳ ಕಾರ್ಯದಶಿಗಳಿಗೆ, ಸದಸ್ಯರುಗಳಿಗೆ, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳಿಗೆ, ಮಹಿಳಾ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸದಸ್ಯರುಗಳಿಗೆ ಶಿಕ್ಷಣ ನೀಡುವುದು.
  • ಸಹಕಾರ ಕ್ಷೇತ್ರದಿಂದ ದೂರವೇ ಉಳಿದಿದ್ದ ಮಹಿಳೆಯರನ್ನು ಈ ಕ್ಷೇತ್ರಕ್ಕೆ ತರಲು ಮಹಾಮಂಡಳವು ವಿಶೇಷ ಕಾರ್ಯಕ್ರಮಗಳನ್ನು ನಡೆಸಿದ್ದು, 1966ರಲ್ಲಿ ಪ್ರತ್ಯೇಕವಾಗಿ ಮಹಿಳಾ ವಿಭಾಗವನ್ನು ಆರಂಭಿಸಿ ಸದಸ್ಯ ಶಿಕ್ಷಣವನ್ನು ತೀವ್ರಗೊಳಿಸಿತು.
  • ಮಹಾಮಂಡಳವು ಸಹಕಾರ ಕ್ಷೇತ್ರದ ಸಿಬ್ಬಂದಿಗಳ ತರಬೇತಿಗಾಗಿ 8 ತರಬೇತಿ ಸಂಸ್ಥೆಗಳನ್ನು ಹೊಂದಿದ್ದು, 24 ವಾರಗಳ ಡಿಪ್ಲೋಮಾ ಇನ್ ಕೋ- ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಯನ್ನು ನೀಡಲಾಗುತ್ತಿದೆ.

      ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಕಳೆದ 48 ವರ್ಷಗಳಿಂದ ಸಹಕಾರ ವಾರಪತ್ರಿಕೆಯನ್ನು ಪ್ರಕಟಿಸುತ್ತಿದೆ. ಈ ಪತ್ರಿಕೆಯಲ್ಲಿ ಸಹಕಾರಕ್ಕೆ ಸಂಬಂಧಪಟ್ಟ ಸರ್ಕಾರದ/ರಿಜಿಸ್ಟ್ರಾರ್‍ರವರ ಆದೇಶಗಳು, ಸುತ್ತೋಲೆಗಳು, ಉತ್ತಮ ಸಹಕಾರ ಸಂಘಗಳ ಬಗ್ಗೆ ಪ್ರಗತಿ ಚಿತ್ರಗಳು, ಉತ್ತಮ ಸಹಕಾರಿಗಳ ಜೊತೆಗೆ ಸಂದರ್ಶನ, ಸಂಘ ಸಂಸ್ಥೆಗಳ ಬಗ್ಗೆ ಲೇಖನ, ಸಹಕಾರಿ ಕ್ಷೇತ್ರದ ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆ.

Help Line